ಬೆಂಗಳೂರು ನಗರದ ಚಾಮರಾಜಪೇಟೆ ಅಸೆಂಬ್ಲಿ ಕ್ಷೇತ್ರ, ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು. ಅದಕ್ಕೆ ಪ್ರಮುಖ ಕಾರಣ, ಜೆಡಿಎಸ್ ತೊರೆದು ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿರುವ ಇಲ್ಲಿನ ಮೂರು ಬಾರಿಯ ಹಾಲೀ ಶಾಸಕ ಜಮೀರ್ ಅಹಮದ್ ಖಾನ್. ಜಮೀರ್ ನನ್ನು ಸೋಲಿಸಲು ಪಣತೊಟ್ಟಿರುವ ದೇವೇಗೌಡ್ರು, ಮಾಜಿ ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಅವರನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಇವರಿಬ್ಬರ ನಡುವೆ ನೇರ ಹಣಾಹಣಿ ಎನ್ನುವ ಲೆಕ್ಕಾಚಾರವಿದ್ದರೂ, ಕಳೆದ ಚುನಾವಣೆಯಲ್ಲಿ ಬಿಜೆಪಿ ಹದಿನೇಳು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿತ್ತು.